ಒರಗುವಿಕೆ (ಪೈರುಗಳ): ಕೆಲವು ಬಗೆಯ ಪೈರುಗಳು ಬೆಳೆದು ವೃದ್ಧಿಯಾಗಿ ತೆನೆಗಳ ಭಾರದಿಂದ ಕಾಂಡ ನೆಲಕ್ಕೆ ಬೀಳುವ ಒಂದು ಪರಿಸ್ಥಿತಿ (ಲಾಡ್ಜಿಂಗ್). ಇದರಿಂದ ಕಾಳುಗಳ ನಾಶವೂ ಪೈರಿನಿಂದ ಕಾಳು ತೆಗೆದ ತರುವಾಯ ದೊರೆಯುವ ಮೇವಿನ ನಾಶವೂ ಸಾಕಷ್ಟು ಪ್ರಮಾಣದಲ್ಲಿ ಆಗಿ ರೈತನಿಗೆ ಉಭಯ ನಷ್ಟವಾಗುತ್ತದೆ. ಒರಗುವಿಕೆಯ ನಿವಾರಣೆ ಮಾಡುವ ದಾರಿಯಲ್ಲಿ ಎದುರಿಸಬೇಕಾದ ಪ್ರಶ್ನೆಗಳು-ಉತ್ತಮ ಫಸಲು ಮತ್ತು ಅದನ್ನು ಸಮರ್ಥವಾಗಿ ಧರಿಸಬಲ್ಲ ಪೈರಿನ ಕಾಂಡ.

ಒರಗುವ ಗುಣ ಅನುವಂಶಿಕವಾಗಿದ್ದರೂ ಅದನ್ನು ವೈಜ್ಞಾನಿಕ ವಿಧಾನಗಳಿಂದ ಸರಿಪಡಿಸಿಕೊಳ್ಳಬಹುದು. ಗಿಡ್ಡ ನಿಲುವಿನ ಜಾತಿಗಳು ಆಳವಾಗಿ ಬೇರೂರಿ ವಿಸ್ತಾರವಾದ ಕ್ಷೇತ್ರದಲ್ಲಿ ಬೇರುಗಳನ್ನು ಪಸರಿಸಿ ಭಾರವಾದ ತೆನೆಗಳನ್ನು ಹೊತ್ತು ಸೆಟೆದು ನಿಲ್ಲುವುವು. ಮಿಶ್ರತಳಿ ಜೋಳ ಹಾಗೂ ಸಜ್ಜೆಯ ಜಾತಿಗಳು, ಮೆಕ್ಸಿಕನ್ ಗೋದಿಯ ಹಾಗೂ ತೈವಾನ್ ಬತ್ತದ ಜಾತಿಗಳು ಒರಗದೆ ನೆಟ್ಟಗೆ ನಿಲ್ಲಬಲ್ಲವು. ಆವು ಅದ್ಭುತವಾದ ಇಳುವರಿಯನ್ನು ಕೊಡವಲ್ಲಿ ಹೆಸರಾಗಿವೆ. ಆದ್ದರಿಂದ ಅಧಿಕೋತ್ಪಾದನೆಯ ಒಂದು ಪ್ರಧಾನ ಅಂಶ ಒರಗುವ ಗುಣದ ನಿವಾರಣೆ.	(ಸಿ.ವಿ.ಡಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ